Politics
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?
ಬಾಗೇಪಲ್ಲಿ: ಸಮಾಜ ಸೇವೆಯ ಮೂಲಕ ರಾಜಕಾರಣಕ್ಕೆ ಬಂದ ಶಾಸಕರಾದ ಸುಬ್ಬಾರೆಡ್ಡಿಯವರ ಬೆಂಬಲಿಗರು ಶಾಸಕರ ಸ್ವಗ್ರಾಮದಲ್ಲೆ ಸರ್ಕಾರಿ ಸೌಲಭ್ಯಗಳಲ್ಲಿ ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇತ್ತಿಚೆಗೆ ಮುಕ್ತಾಯವಾದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಮಗೆ ಮತ ನೀಡಿಲ್ಲ ಎಂಬ ನೆಪದಲ್ಲಿ ಶಾಸಕರ ಬೆಂಬಲಿಗರು ಸ್ವಗ್ರಾಮವಾದ ಚಿನ್ನಕಾಯಲಪಲ್ಲಿಯಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ಕೊಳವೆಬಾವಿಯನ್ನು ಕೊರೆಯದಂತೆ ಅಡ್ಡಿ ಪಡಿಸಲಾಗಿದೆ. ಬಂದರ್ಲ ನಾರಾಯಣಪ್ಪ ಎಂಬ ರೈತ ಕುಟುಂಬದವರಿಗೆ ಸರ್ಕಾರದಿಂದ ಕೊಳವೆ ಬಾವಿ ಕೊರೆಸಲು ಸೌಲಭ್ಯ ಸಿಕ್ಕಿತ್ತು. ಅದರಂತೆ ಇತ್ತೀಚೆಗೆ ಕೊಳವೆ ಬಾವಿ ಕೊರೆಯುವ ವಾಹನ ರೈತನ ಜಮೀನಿಗೆ ಬಂದಿದೆ. ಕೊಳವೆಬಾವಿ ಕೊರೆಯಲು ಆರಂಭಿಸಿ ಸುಮಾರು 65 ರಿಂದ 70 ಅಡಿಗಳಷ್ಟು ಆಳಕ್ಕೆ ಕೊರೆಯುತ್ತಿದ್ದಂತೆಯೇ ಶಾಸಕರ ಬೆಂಬಲಿಗರು ಸ್ಥಳಕ್ಕೆ ಆಗಮಿಸಿ ನೀವು ನನಗೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಹಾಕಿಲ್ಲ ಹಾಗಾಗಿ ಕೊಳವೆ ಬಾವಿ ಕೊರೆಯಬೇಡಿ ಎಂದು ಅಡ್ಡಿ ಪಡಿಸಿ ವಾಹನದ ಕೀಲಿ ಕಿತ್ತುಕೊಂಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.
ಶಾಸಕರ ಬೆಂಬಲಿಗರ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಸಾಮಾನ್ಯನು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐಎಂ ಮುಖಂಡ ರಘುರಾಮರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೆ ಅಲ್ಲದೆ ಚಿನ್ನಕಾಯಲಪಲ್ಲಿಯ ನೆರೆಯ ಗ್ರಾಮವಾದ ದಿಗವ ಮದ್ದಲಖಾನೆ ಗ್ರಾಮದಲ್ಲಿ ಶಾಸಕರ ಬೆಂಬಲಿಗರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅದೇ ದ್ವೇಷದಿಂದ ಊರಲ್ಲಿನ ಶುದ್ದ ಕುಡಿಯುವ ನೀರಿನ ಘಟಕದ ಗಾಜಗೆ ಕಲ್ಲು ಹೊಡೆದಿದ್ದಾರೆ. ಸಮೀಪದ ಮತ್ತೊಂದು ಗ್ರಾಮವಾದ ಕೊತ್ತೂರಿನಲ್ಲಿ ಸರ್ಕಾರಿ ಶಾಲೆಯ ಮೇಲಿನ ನೀರಿನ ಟ್ಯಾಂಕನ್ನು ಉರುಳಿಸಿದ್ದಾರೆ ಎಂದು ರಘುರಾಮರೆಡ್ಡಿ ಬೇಸರ ವ್ಯಕ್ತ ಪಡಿಸಿದರು.
ಅಧಿಕಾರ ಕೈಯಲ್ಲಿದೆ ಎಂದು ಶಾಸಕರ ಬೆಂಬಲಿಗರು ದೌರ್ಜನ್ಯ, ಅನ್ಯಾಯಗಳನ್ನು ಮಾಡುವುದು ಸರಿಯಲ್ಲ. ತಾಲ್ಲೂಕಿನಲ್ಲಿ ರಸ್ತೆ ,ಚರಂಡಿ, ಶುದ್ದ ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಅವುಗಳಿಗೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದು ಡಿ.ವೈ.ಎಫ್.ಐ ನ ಯುವ ಮುಖಂಡ ಐವಾರಪಲ್ಲಿ ಹರೀಶ್ ತಿಳಿಸಿದರು.
Politics
ಅಕಾಲಿಕ ಮಳೆಯಿಂದ ರೈತರು ಬೆಳೆದ ಕಡಲೆ ಬೆಳೆ ನಾಶ : ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ
ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಮತ್ತು ಐಮಂಗಲ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದ ರೈತರು ಬೆಳೆದ ಕಡಲೆ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಶಾಸಕರಾದ ಶ್ರೀ ತಿಪ್ಪ ರೆಡ್ಡಿ , ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್ ಅಶೋಕ್ ರವರು, ಪರಿಶೀಲಿಸಿ ರೈತರೊಂದಿಗೆ ಮಾತನಾಡಿ, ಸೂಕ್ತ ಕ್ರಮಗಳೊಂದಿಗೆ ಪರಿಹಾರ ಒದಗಿಸುವಂತೆ ಭರವಸೆ ನೀಡಿದರು.
Politics
ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ಆಂದೋಲನ ನಡೆಸುವುದಕ್ಕಾಗಿ ಪೂರ್ವ ತಯಾರಿ
ಬೆಳಗಾವಿ : ಇಂದು ಬೆಳಗಾವಿಯಲ್ಲಿಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರೋಧಿಸಿ ಇದೇ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ರಾಜ್ಯದ ನಾನಾ ಭಾಗಗಳಿಂದ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ಆಂದೋಲನ ನಡೆಸುವುದಕ್ಕಾಗಿ ಪೂರ್ವ ತಯಾರಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ರವೀಂದ್ರ ನಾಯ್ಕರ್, ಕರ್ನಾಟಕ ಕೃಷಿಕ ಸಮಾಜ ಸಂಘಟನೆಯ ಸಿದ್ಧಗೌಡ ಮೋದಗಿ, ಭೂಮಿ-ವಸತಿ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ಕೂಲಿ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು, ಶ್ರಮಿಕ ಸಂಘಟನೆಯ ವರದ ರಾಜೇಂದ್ರ, ಕರ್ನಾಟಕ ಜನ ಶಕ್ತಿಯ ನೂರ್ ಶ್ರೀಧರ್ ಹಾಗೂ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಹಾಗೂ ಮಹಿಳಾ ಸಂಘಟನೆಯವರೆಲ್ಲ ಭಾಗವಹಿಸಿದ್ದರು. ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬೆನ್ನೆಲುಬಾಗಿ ಈ ತಯಾರಿ ನಡೆಯುತ್ತಿದೆ.
Politics
ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದ ಉದ್ಘಾಟನಾ ಸಮಾರಂಭ
ಬೆಳಗಾವಿ : ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪ ಮುಖ್ಯಸ್ಥ ವಿ.ಆರ್. ಸುದರ್ಶನ್, ಅನಿಲ್ ಪಾಟೀಲ್, ನಾಗರಾಜ್ ಗೌರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.