ಮಾಹಿತಿ
ಜನವರಿ 10ರ ನಂತರ ರೇಷನ್ ಕಾರ್ಡ್ ಗೆ ಅರ್ಜಿ
ಬೆಂಗಳೂರು : ರಾಜ್ಯದಾದ್ಯಂತ ಕರೋನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹೊಸ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವ ಹಾಗೂ ಬಾಕಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಜನವರಿ ಹತ್ತರ ನಂತರ ಆರಂಭಿಸುವ ಸಾಧ್ಯತೆ ಇದೆ ಎಂದು ಆಹಾರ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.
ಅರ್ಜಿಸಲ್ಲಿಸಲು ಬೇಕಾದ ದಾಖಲೆಗಳು : ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸಸ್ಥಳ ದೃಢೀಕರಣ ಪತ್ರ
ಮಾಹಿತಿ
ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ
ನಾಳೆಯಿಂದ ದೇಶದ ಪರ್ಯಾಯ ದೀಪದ ಹಲವು ಭಾಗಗಳಲ್ಲಿ ಹಾಗೂ ಕೇಂದ್ರ ಭಾರತದ ಹಲವು ಪ್ರದೇಶಗಳಲ್ಲಿ ಗುಡುಗುಸಹಿತ ಮಳೆಯಾಗಲಿದೆ.
ಒಡಿಸ್ಸಾ, ಪಶ್ಚಿಮ ಬಂಗಾಳ, ಸಿಕ್ಕಿಂ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ. ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಹಾಸನ, ಧಾರವಾಡ, ಬೀದರ್, ಹಾವೇರಿ ,ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾಹಿತಿ
ಬಿಳ್ಳೂರಿನಲ್ಲಿ ಕುಷ್ಟರೋಗ ನಿರ್ಮೂಲನಾ ಅರಿವು ಕಾರ್ಯಕ್ರಮ
ಬಾಗೇಪಲ್ಲಿ: ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಪ್ರೌಢಶಾಲಾ ಸಂಯುಕ್ತಾಶ್ರಯದಲ್ಲಿ
ಶನಿವಾರ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಅರಿವು ಕಾರ್ಯಕ್ರಮ ನಡೆಯಿತು.
ವೈದ್ಯಾಧಿಕಾರಿ ಡಾ.ಶಿರೀಷ್ ಕಾಶ್ಯಪ್ ಮಾತನಾಡಿ, ಕುಷ್ಟ ಒಂದು ಸಾಂಕ್ರಾಮಿಕ ರೋಗ. ಇದು ಮೈಕ್ರೋ ಬ್ಯಾಕ್ಟೀರಿಯ ಲೆಪ್ರೆ ಎಂಬ ಬ್ಯಾಕ್ಟೀರಿಯದಿಂದ ಹರಡುತ್ತದೆ. ಇದು ಚರ್ಮ ಮತ್ತು ನರಗಳಿಗೆ ಬರುವ ಕಾಯಿಲೆ, ವಂಶಪಾರಂಪರ್ಯದಿಂದ ಅನುವಂಶಿಕವಾಗಿ ಬರುವುದಿಲ್ಲ ಎಂದರು.
ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ, ತಾಮ್ರ ಬಣ್ಣದ ಕೆಂಪು ಮಿಶ್ರಿತ ಮಚ್ಚೆ ಕಂಡು ಬಂದರೇ ಕೂಡಲೇ ಸ್ಥಳೀಯ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಮಚ್ಚೆಯಲ್ಲಿ ಸ್ಪರ್ಶಜ್ಞಾನ, ನೋವು, ನವೆ ಇರುವುದಿಲ್ಲ. ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ಹಾಗೂ ಸ್ಪರ್ಶಜ್ಞಾನ ಕಳೆದುಕೊಳ್ಳುವುದು. ಚರ್ಮದ ಮೇಲೆ ಎಣ್ಣೆ ಸವರಿದಂತೆ ಕಾಣಿಸುವುದು. ಮುಖ ಮತ್ತು ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ರೋಗದ ಲಕ್ಷ ಣಗಳು ಇತಂಹ ತೊಂದರೆಗಳು ಕಂಡುಬರದೇ ಕೂಡಲೇ ಸ್ಥಳೀಯ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಪಡೆದುಕೊಂಡು ರೋಗದಿಂದ ಮುಕ್ತಿಗೊಳ್ಳಬಹುದು. ಈ ನಿಟ್ಟಿನಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ರೋಗದಿಂದ ಉಂಟಾಗುವ ತೊಂದರೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರಾಢಶಾಲಾ ಮುಖ್ಯ ಶಿಕ್ಷಕ ವಿ.ಮಲ್ಲಪ್ಪ ಮಾತನಾಡಿ
ಕುಷ್ಠ ರೋಗದ ಬಗ್ಗೆ ಜನರಲ್ಲಿ ಹಲವಾರು ಅಪನಂಬಿಕೆಗಳು ಇವೆ. ಅವುಗಳೆಂದರೆ ಈ ರೋಗವು ಹಿಂದಿನ ಜನ್ಮದ ಪಾಪದಿಂದ ಮತ್ತು ಬೇರೆಯವರ ಶಾಪದಿಂದ ಬರುತ್ತದೆ ಎಂಬ ಮೂಢನಂಬಿಕೆ ಜನರಲ್ಲಿ ದಟ್ಟವಾಗಿದೆ. ಈ ರೋಗಕ್ಕೆ ಮದ್ದು ಇಲ್ಲ ಎಂಬ ಕಲ್ಪನೆ ಹಲವರಲ್ಲಿ ಇದೆ. ಯಾವುದೇ ಕಾರಣಕ್ಕೂ ವಂಶಪಾರಂಪರ್ಯದಿಂದಲೂ ಬರುವುದಿಲ್ಲ. ಕುಷ್ಠ ರೋಗ ಚಿಕಿತ್ಸೆ ಇಲ್ಲ ಮತ್ತು ಗುಣಮುಖವಾಗುವುದಿಲ್ಲ ಎಂಬ ಅಪನಂಬಿಕೆ ಇದೆ ಎಂದರು.
ಈ ರೋಗ ಶಾಪಗ್ರಸ್ತವೂ ಅಲ್ಲ. ಪಾಪದ ಫಲವೂ ಅಲ್ಲ. ಕುಷ್ಟ ರೋಗಿಗಳನ್ನು ಕೀಳಾಗಿ ಕಾಣದೇ ಮತ್ತು ತಾರತಮ್ಯ ಮಾಡದೇ ಅವರು ನಮ್ಮಂತೆ ಮನುಜರು ಎಂದು ಜನರು ಅರಿತುಕೂಳ್ಳಬೇಕು. ಅವರನ್ನು ಮಾನವೀಯ ಕಳಕಳಿಯಿಂದ ಕಾಣಬೇಕು ಮತ್ತು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಆಗ ಮಾತ್ರ `ಕುಷ್ಟ ರೋಗ ನಿರ್ಮೂಲನಾ ದಿನಾಚರಣೆ’ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷಕರಾದ ಎನ್.ಆರ್.ಕುಮಾರ್,ಕೆ.ಎಂ.ಕೃಷ್ಣಪ್ಪ,ಹೆಚ್.ಕೆ.ಕೃಷ್ಣಮೂರ್ತಿ,ಚಿಕ್ಕಣ್ಣ,ಸಂಗಮೇಶ್ ಮತ್ತು ಶಿಕ್ಷಕಿ ವೇಣಿಬಾಯಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ,ಆಶಾ ಕಾರ್ಯಕರ್ತೆಯರು ಮತ್ತಿತರರು ಭಾಗವಹಿಸಿದ್ದರು.
ಮಾಹಿತಿ
ಬಡವರಿಗೆ ತಲುಪಬೇಕಾಗಿದ್ದ ದಿನಸಿ ಕಿಟ್ ಗಳು ಗುಂಡಾಂಜನೇಯ ದೇವಾಲಯದಲ್ಲೇಕೆ ದಾಸ್ತಾನು ಮಾಡಲಾಗಿತ್ತು?
ಬೆಂಗಳೂರು: ಕೊಡಿಗೆಹಳ್ಳಿಯ ಗುಂಡಾಂಜನೇಯ ದೇವಸ್ಥಾನದ ಆವರಣದಲ್ಲಿ 8 ಸಾವಿರ ಅತ್ಯಾವಶ್ಯಕ ದಿನಸಿ ಕಿಟ್‌ಗಳನ್ನು ಸಂಗ್ರಹಿಸಿಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಇಷ್ಟೊಂದು ಪ್ರಮಾಣದ ಕಿಟ್ ಸಂಗ್ರಹ ಮಾಡಿದ್ದು ಯಾಕೆ? ಕೋವಿಡ್ ಸಮಯದಲ್ಲಿ ಬಡವರಿಗೆ ತಲುಪಬೇಕಾದ ರೇಷನ್ ಕಿಟ್‌ಗಳನ್ನು ಈಗ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ಯಾ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.
ಅಡುಗೆ ಎಣ್ಣೆ, ಮಸಾಲಾ, ಹಿಟ್ಟು, ಸಕ್ಕರೆ ಪ್ಯಾಕೆಟ್‌ಗಳು ಈ ಕಿಟ್‌ನಲ್ಲಿದೆ. 8 ತಿಂಗಳಿನಿಂದ ಈ ವಸ್ತುಗಳು ದಾಸ್ತಾನುಗೊಂಡಿದ್ದು, ಈಗಾಗಲೇ ವಸ್ತುಗಳ ಬಳಕೆಯ ಅವಧಿ ಮುಕ್ತಾಯಗೊಂಡಿದೆ. ಅಕ್ಕಿ, ಬೆಳೆ, ಹಿಟ್ಟುವಿನಲ್ಲಿ ಇಲಿ, ಹೆಗ್ಗಣಗಳ ಓಡಾಡುತ್ತಿದ್ದು, ಹುಳಗಳು ಸೇರಿವೆ.
ಯಲಹಂಕ ಮತ್ತು ಕೊಡಿಗೆಹಳ್ಳಿಯ ಬಿಬಿಎಂಪಿ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಜನರಿಗೆ ಈ ಕಿಟ್ ನೀಡದೇ, ಗುಂಡಾಂಜನೇಯ ದೇವಸ್ಥಾನದ ಆವರಣದಲ್ಲಿ ಯಾರಿಗೂ ಗೊತ್ತಾಗದಂತೆ ಕಳೆದ ಏಳೆಂಟು ತಿಂಗಳಿನಿಂದ ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಬಿಬಿಎಂಪಿಯ ಯಲಹಂಕ ವಲಯ ಕಛೇರಿ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಪ್ರಕಟವಾಗಿದೆ. 8 ಸಾವಿರ ಕಿಟ್‌ಗಳ ಪೈಕಿ 4-5 ಸಾವಿರ ಕಿಟ್‌ಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂಬ ಮಾಹಿತಿ ಇದೆ.
ದೇವಸ್ಥಾನದ ಆಡಳಿತ ಮಂಡಳಿ ಸಾಕಷ್ಟು ಸಲ, ಇಲ್ಲಿಂದ ಆಹಾರದ ಕಿಟ್‌ಗಳನ್ನು ತಗೆದುಕೊಂಡು ಹೋಗುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ತಮಗೆ ಬೇಕಾದಾಗ ಕಾರುಗಳಲ್ಲಿ, ಟೆಂಪೋಗಳಲ್ಲಿ ಎಷ್ಟು ಬೇಕೋ ಅಷ್ಟು ಕಿಟ್‍ಗಳನ್ನು ಶಿಫ್ಟ್ ಮಾಡುತ್ತಿದ್ದಾರೆ ಎಂಬ ಆರೋಪ ಬಂದಿದೆ.
ಈ ವಿಚಾರದ ಬಗ್ಗೆ ಯಲಹಂಕದ ವಿಭಾಗದ ಪಾಲಿಕೆಯ ಜಂಟಿ ಆಯುಕ್ತ ಡಿ. ಆರ್ ಅಶೋಕ್ ಅವರು ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.