ಸುದ್ದಿ
ಬಾಗೇಪಲ್ಲಿಯಲ್ಲಿ ಅದ್ದೂರಿ ಗಿರಿಜನೋತ್ಸವ
ಬಾಗೇಪಲ್ಲಿ: ಮಾನವ ಎಷ್ಟೇ ಆಧುನಿಕತೆಯನ್ನು ಸಾಧಿಸಿದ್ದರು ನಮ್ಮ ಪೂರ್ವಜರು ಕಲಿಸಿಕೊಟ್ಟ ಸಂಸ್ಕೃತಿ, ಸಂಪ್ರದಾಯ, ಜಾನಪದಗಳು ಇಂದಿಗೂ ಕೂಡ ಜನಪ್ರಿಯವೇ ಆಗಿವೆ. ಕನ್ನಡ ನಾಡಿನ ವೈವಿಧ್ಯಮಯ ಕಲೆ, ಜಾನಪದದ ಶ್ರೀಮಂತಿಕೆ ನಿಜಕ್ಕೂ ಅಭಿಮಾನ, ಹೆಮ್ಮೆ ಮೂಡಿಸುವಂತದ್ದಾಗಿದೆ.
ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಆಯೋಜಿಸಲಾಗಿದ್ದ ‘ನಮ್ಮ ಜನ-ನಮ್ಮ ಸಂಸ್ಕೃತಿ’ ಗಿರಿಜನೋತ್ಸವಕ್ಕೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಸಾವಿರಾರು ಜನರು ಸಾಕ್ಷಿಯಾದರು.
ಇದೊಂದು ಅಪರೂಪದ ಜಾನಪದ ಹಬ್ಬವಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜಾನಪದ ಕಲಾತಂಡಗಳು ತಮ್ಮ ಕಲಾ ಪ್ರದರ್ಶನಗಳನ್ನು ನೀಡುತ್ತಿದ್ದಂತೆಯೇ ಹರ್ಷೋದ್ಗಾರ ಕೇಳಿ ಬರುತ್ತಿತ್ತು.
ಗಿರಿಜನೋತ್ಸವ ಕಾರ್ಯಕ್ರಮವನ್ನು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ತಾಲ್ಲೂಕಿನಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಮನರಂಜನೆ ಕಾರ್ಯಕ್ರಮಗಳು ಮರೀಚಿಕೆ ಯಾಗಿದ್ದವು. ಇಂದು ಕನ್ನಡ ಸಂಸ್ಕೃತಿ ಇಲಾಖೆ ಗಿರಿಜನೋತ್ಸವ ಆಯೋಜನೆ ಮಾಡಿರುವುದು ಬಹಳ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ
ಮಗುವಿನಲ್ಲೂ ಕಲೆ ಇರುತ್ತದೆ. ಆದರೆ ಇಂತಹ ವೇದಿಕೆಗಳಲ್ಲಿ ತಮ್ಮ ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಒಳ್ಳೆಯ ಪ್ರತಿಭೆಯನ್ನು ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ನಾಡಿನ ಜಾನಪದ ಕಲಾ ಪ್ರಕಾರದ ಬೆಳವಣಿಗೆಗೆ ಹಗಲಿರುಳೂ ಶ್ರಮಿಸುತ್ತಿರುವ ನಾಡಿನ ಶೋಷಿತರ ಧ್ವನಿಯಾಗಿ, ಅವರ ಕಲೆಯ ರಾಯಭಾರಿಯಾಗಿರುವ ಮಂಜಮ್ಮ ಜೋಗತಿ ಅವರು ಜಾನಪದ ಅಕಾಡೆಮಿ ಅಧ್ಯಕ್ಷರಾದರೂ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.
ಮಂಜಮ್ಮ ಜೋಗತಿ ಅವರು ತನ್ನಂತೆ ಸಂಕಷ್ಟದಲ್ಲಿರುವ ಜೋಗತಿಗೆ ಪುಟ್ಟಗೂಡಿನಲ್ಲಿಯೇ ಆಸರೆ ನೀಡಿ ತಾಯಿಪ್ರೀತಿ ಮೆರೆದಿದ್ದಾರೆ. ಅವರ ಕಲಾಸೇವೆ ಪರಿಗಣಿಸಿ ರಾಜ್ಯೋತ್ಸವ, ಜಾನಪದಶ್ರೀ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮಂಜಮ್ಮ ಜೋಗತಿ ಅವರನ್ನು ಹುಡುಕಿಕೊಂಡು ಬಂದಿವೆ ಎಂದು ಹೇಳಿದರು.
ಮಂಜಮ್ಮ ಜೋಗತಿಯಾಗಿ ಬದಲಾದ ಕಥೆ ಈ ಸಮಾಜದಲ್ಲಿನ ಮೌಢ್ಯ, ಅಂಧವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಜೀವನವಿಡೀ ಕಷ್ಟ, ಕಾರ್ಪಣ್ಯದಲ್ಲೇ ಕೈತೊಳೆಯುತ್ತ ಜೋಗತಿಯಾಗಿ ಬದುಕುತ್ತ ಭಿಕ್ಷೆ ಬೇಡಿ ಜೀವನ ಸಾಗಿಸಿದ್ದು, ಕಣ್ಣೀರು ಸುರಿಸುವ ಕಥೆಯಾಗಿದೆ. ತದನಂತರ ಜನಪದ ಕಲೆಯಿಂದ ಕಷ್ಟಪಟ್ಟು ಮೇಲೆ ಬಂದ ನಂತರ
ಕೇಂದ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿರುವ ಮಂಜಮ್ಮ ಜೋಗತಿ ರವರಿಗೆ ಸಂತಸವಾಗಿದೆ ಈ ಪ್ರಶಸ್ತಿ ಎಲ್ಲಾ ಕಲಾವಿದರ ಪ್ರಶಸ್ತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಆರ್.ನರೇಂದ್ರ ಬಾಬು, ಪೌರಸಭಾಧ್ಯಕ್ಷೆ ಗುಲ್ನಾಜ್ ಬೇಗಂ, ಜಿ.ಪಂ ಸದಸ್ಯ ಬೂರಗಮಡುಗು ಲಕ್ಷ್ಮೀ ನರಸಿಂಹಪ್ಪ, ಸರಸ್ವತಮ್ಮ ಶಿವರಾಮಿರೆಡ್ಡಿ,ಎ.ಶ್ರೀನಿವಾಸ್, ಬಿ.ವಿ.ಮಂಜುನಾಥ, ತಹಶೀಲ್ದಾರರಾದ ಡಿ.ವಿ.ದಿವಾಕರ್, ತಾ.ಪಂ.ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್.ಮಂಜುನಾಥ ಸ್ವಾಮಿ, ಎಸ್. ಸಿದ್ದಪ್ಪ, ಡಿ.ಎಂ.ರವಿಕುಮಾರ್ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿ
ಕನ್ನಡ ಕಲಾಲಯದಲ್ಲಿ ಉಚಿತ ಥಿಯೇಟರ್ ಅಭಿನಯ ಕಾರ್ಯಗಾರ ಪ್ರಾರಂಭ
ಪೀಣ್ಯ ದಾಸರಹಳ್ಳಿ : ಮಲ್ಲಸಂದ್ರದ ಕನ್ನಡ ಕಲಾಲಯದಲ್ಲಿ ತರುಣ್ ಕನ್ನಡಿಗ ನೇತೃತ್ವದಲ್ಲಿ ಥಿಯೇಟರ್ ಅಭಿನಯ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಬಳಿಕ ಮಾತನಾಡಿದ ತರುಣ್ ಕನ್ನಡಿಗ ‘ ಈ ಕಾರ್ಯಗಾರದಲ್ಲಿ ಮಕ್ಕಳಿಗೆ ದೇಹ-ಮನಸ್ಸು ಧ್ವನಿ ಬೆಳವಣಿಗೆಗೆ ಮತ್ತು ಅಭಿನಯ ಕಲಿಯಲು ಪೂರಕವಾಗಿದೆ. ನುರಿತ ನಿರ್ದೇಶಕರಿಂದ ಕಲಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಗಾರವನ್ನು ಏರ್ಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಂಗನಟಿ ಸುನೀಲ ಚೇತನ್, ನಟ ನಿರ್ದೇಶಕರಾದ ಚೇತನ್ ನೀನಾಸಂ, ನವೀನ್ ನೀನಾಸಂ, ಪ್ರಿಯಾಂಕ ತರುಣ್ ಮುಂತಾದವರಿದ್ದರು.
ಸುದ್ದಿ
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಬಾಗೇಪಲ್ಲಿ: ಪೆಟ್ರೋಲ್ ಡೀಸೆಲ್,ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ನೇತೃತ್ವದಲ್ಲಿ ಬಾಗೇಪಲ್ಲಿ ಡಾ.ಎಚ್.ಎನ್ ವೃತದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಸಾಮಾನ್ಯರ ಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಭಾರತದಲ್ಲಿ ಜೀವನ ಮಾಡೋದೇ ಕಷ್ಟವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಸಿಪಿಐಎಂ ಪಕ್ಷದ ಮುಖಂಡ ಹಾಗೂ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಪಿ.ಎಂ.ಮುನಿವೆಂಕಟಪ್ಪ ಮಾತನಾಡಿ ಕೋವಿಡ್ ಲಾಕ್‌ಡೌನ್ ನಂತರ ಚಾಲಕರ ಜೀವನ ಮತ್ತಷ್ಟು ಹದಗೆಟ್ಟಿದೆ. ಸರ್ಕಾರವು ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಲೇ ಇದೆ. ಕೇವಲ ಚಾಲಕರಷ್ಟೇ ಅಲ್ಲ, ಅಡುಗೆ ಸಿಲಿಂಡರ್ ದರ ಕೂಡ ಏರಿಸುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದರು.
ಇಂತಹ ಸಂಕಷ್ಟದ ನಡುವೆ ರಾಜ್ಯ ಸರ್ಕಾರವು ಟಿ.ವಿ, ಬೈಕ್ ಇರುವವರ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ನೀಡಿರುವ ಹೇಳಿಕೆಯಿಂದ ಬಡವರು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳು, ತೈಲ ಬೆಲೆ ಇಳಿಸಬೇಕು. ಮಾರ್ಚ್ 4ರ ಗಡುವಿನೊಳಗೆ ಸರ್ಕಾರ ಚಾಲಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ತಿಳಿಸಿದರು.
ಎಡಪಂಥೀಯ ಚಿಂತಕ ಹಾಗೂ ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್ ಅವುಲಪ್ಪ ಮಾತನಾಡಿ
ಕೊರೊನಾ ಬಳಿಕ ಪುನಶ್ಚೇತನದ ಹಾದಿ ತುಳಿದಿರುವ ಸಾಮಾನ್ಯರ ಜೀವನ ಹಾಗೂ ಆರ್ಥಿಕ ಸ್ಥಿತಿಗತಿಯ ಮೇಲೆ ಪೆಟ್ರೋಲ್ ಬೆಲೆ ಏರಿಕೆಯು ಬರೆ ಎಳೆದಂತಾಗಿದೆ. ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಜನರು ತತ್ತರಿಸಿ ಹೋಗಿದ್ದಾರೆ. ಜೊತೆಗೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಹೆಚ್ಚಾಗಿರುವುದು ಜೀವನ ನಿರ್ವಹಣೆಗೆ ಕಠಿಣ ಸವಾಲು ಹಾಕಿದಂತಾಗಿದೆ ಎಂದು ಹೇಳಿದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಅನಿಲ್ ಕುಮಾರ್ ಅವುಲಪ್ಪ, ಮಂಜುನಾಥ ರೆಡ್ಡಿ, ಸಾವಿತ್ರಮ್ಮ, ಮುನಿವೆಂಕಟಪ್ಪ, ಅಶ್ವಥಪ್ಪ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿ
ಕೃಷಿ ವಿಶ್ವವಿದ್ಯಾಲಯ ಆಯೋಜಿಸಲಾಗಿದ್ದ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭ
ಬೆಂಗಳೂರು : ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಇಲ್ಲಿ ಆಯೋಜಿಸಲಾಗಿದ್ದ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ ಶ್ರೀ ತೇಜಸ್ವಿ ಸೂರ್ಯ ರವರು, ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಲವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಎಸ್ ರಾಜೇಂದ್ರ ಪ್ರಸಾದ್ (ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು) ಶ್ರೀ ಗುರುಮೂರ್ತಿ, ಡಾ. ವಿ ನಾಗೇಗೌಡ, ಶ್ರೀ ಎಸ್ ಎಂ ನಾರಾಯಣ ರೆಡ್ಡಿ, ಡಾ. ಬಿ ಕೆ ಕುಮಾರಸ್ವಾಮಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.