ಸುದ್ದಿ
ಕೃಷಿ ಇಲಾಖೆ ಕಂದಾಯ ಇಲಾಖೆಯ ವತಿಯಿಂದ ಬೆಳೆ ಹಾನಿ ಜಂಟಿ ಸಮೀಕ್ಷೆ
ಸತತ ಮಳೆಯಿಂದ ಹತ್ತಿ ತೊಗರಿ ಮತ್ತು ಇತರ ಬೆಳೆಗಳು ನಾಶವಾಗಿದ್ದು ಕೃಷಿ ಇಲಾಖೆ ಕಂದಾಯ ಇಲಾಖೆಯ ವತಿಯಿಂದ ಕವಿತಾಳ ಹೋಬಳಿಯ ಹುಸೇನಪುರ ಗ್ರಾಮದಲ್ಲಿ ಬೆಳೆ ಹಾನಿಯ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಕುಮಾರಿ ಅಂಬಿಕಾ ವಿ ತಿಳಿಸಿದ್ದಾರೆ.
ಹೋಬಳಿಯ ವ್ಯಾಪ್ತಿಯಲ್ಲಿ ಮಳೆಗೆ ಸಾಕಷ್ಟು ಬೆಳೆಗಳು ಹಾನಿಯಾಗಿವೆ. ಹಿರಿಯ ಅಧಿಕಾರಿಗಳು ಸೂಚಿಸಿದಂತೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಬೆಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಅನೇಕ ರೈತರ ಹೊಲಗಳಿಗೆ ಭೇಟಿ ನೀಡಲಾಗಿದೆ. ಕವಿತಾಳ ಹೋಬಳಿಯ ಎಲ್ಲಾ ಗ್ರಾಮಗಳ ಬೆಳೆ ಹಾನಿಯ ವರದಿಯನ್ನು ಮೇಲಾಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅನಿಲ್ ಮತ್ತು ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕರಾದ ಪ್ರಜ್ವಲ್ ಕುಮಾರ್ ಅವರು ಉಪಸ್ಥಿತರಿದ್ದರು.
ಸುದ್ದಿ
ಚಾಲಕರ ವೇತನದಿಂದ ದಂಡದ ಮೊತ್ತ ವಸೂಲಿ
ಬೆಂಗಳೂರು : ಸಂಚಾರ ನಿಯಮ ಉಲ್ಲಂಘಿಸುವ ಬಸ್ ಚಾಲಕರ ವೇತನದಿಂದ ದಂಡದ ಮೊತ್ತವನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗಿಯ ಸಂಚಾರ ಅಧಿಕಾರಿಗಳ ಸಭೆಯಲ್ಲಿ ದಂಡದ ಮೊತ್ತ ಪಾವತಿ ಕುರಿತು ಚರ್ಚೆ ಮಾಡಲಾಯಿತು.
ಸುದ್ದಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು ಮನವಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು- ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಮನವಿ.
ರಾಯಚೂರು.ಅ.23: ಅತ್ಕೂರು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರೆಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಅತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಎರಡು ಮೀಸಲು ಸ್ಥಾನಗಳು ನಿಗದಿಗೊಳಿಸಲಾಗಿತ್ತು. ಆದರೆ ಒಂದು ಸ್ಥಾನವನ್ನು ಸರ್ಜಾಪುರು ಗ್ರಾಮಕ್ಕೆ ನಿಗದಿಗೊಳಿಸಲಾಗಿದೆ. ಸರ್ಜಾಪುರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 100 ಜನರಿಗಿಂತ ಕಡಿಮೆ. ಆದರೆ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 1400 ಕಿಂತ ಜಾಸ್ತಿ. ಆದಕಾರಣ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಅಬ್ರಹಾಂ ಕಮಲಾಪೂರು, ಆಂಜನೇಯ, ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಕಲ್ಲು ಚಪ್ಪಡಿ ಬಿದ್ದು ತಂದೆ, ಮಗ ಸಾವು
ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು, ತಾಯಿ ಮಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿ: ಬೆಂಗಳೂರು ರಸ್ತೆಯಲ್ಲಿರು ವೈಜಕೂರು ಗ್ರಾಮದಲ್ಲಿ ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ಮನೆಯಲ್ಲಿದ್ದ ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು ಇನ್ನಿಬ್ಬರು ತಾಯಿ ಮಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗಿನ ಜಾವ ಸುಮಾರು ೬-೩೦ ಗಂಟೆ ಸಮಯದಲ್ಲಿ ನಡೆದಿದೆ.
ಕಲ್ಲುಚಪ್ಪಡಿ ಕೆಳೆಗೆ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿರುವವರನ್ನು ವೈಜಕೂರು ಗ್ರಾಮದ ನಿವಾಸಿ ಕೈವಾರದಲ್ಲಿ ಪೋಸ್ಟ್ ಮೆನ್ ಆಗಿ ಕೆಲಸ ನಿರ್ವಸುತ್ತಿದ್ದ ರವಿಕುಮಾರ್ (೪೦) ಮತ್ತು ಆತನ ಮಗ ರಾಹುಲ್ (೧೨) ಎಂದು ಗುರುತಿಲಾಗಿದ್ದು, ಗಾಯಗೊಂಡ ಮಹಿಳೆಯನ್ನು ರವಿಕುಮಾರ್ ಪತ್ನಿ ಅಂಗ ನವಾಡಿ ಶಿಕ್ಷಕಿ ರಾಧಮ್ಮ (೩೫) ಮತ್ತು ರುಚಿತಾ (೧೪) ವರ್ಷದ ಹುಡುಗಿ ಎಂದು ಗುರುತಿಸಲಾಗಿದೆ.
ಇನ್ನು ಗಾಯಗೊಂಡವರನ್ನು ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಕೃಷ್ಣಾರೆಡ್ಡಿ ಮತ್ತು ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ವರದಿ : ಕೆ.ಮಂಜುನಾಥ್ ಶಿಡ್ಲಘಟ್ಟ